ಪ್ರಿವಿ ಕೌನ್ಸಿಲ್		

	ಇಂಗ್ಲೆಂಡಿನಲ್ಲಿ ದೊರೆಯಿಂದ ನೇಮಕವಾದ ಆಪ್ತಮಂಡಲಿ. ಇದು ಮಧ್ಯಯುಗೀನ ಕಾಲದ ಗ್ರೇಟ್ ಕೌನ್ಸಿಲ್ (ಮಹಾಮಂಡಲಿ), ಇವಕ್ಕಿಂತ ಭಿನ್ನವಾದ್ದು. ಕಾಲಕ್ರಮದಲ್ಲಿ ಇದು ನ್ಯಾಯ ಕಾರ್ಯಭಾರಗಳನ್ನು ಬಹುತೇಕ ಕಳೆದುಕೊಂಡಿದ್ದರಿಂದ, ರಾಜಕೀಯ ತೀರ್ಮಾನಗಳ ಮೇಲಣಹೊಣೆಯನ್ನು ದೊರೆ ಕಳೆದುಕೊಂಡಿದ್ದರಿಂದ ಪರಿಣಾಮಕಾರಿ ಸಂಸ್ಥೆಯಾಗಿ ಮುಂದುವರಿಯಲಿಲ್ಲ. ಆದರೂ ಅಧ್ಯಕ್ಷನಿಂದ ಕೂಡಿದ ಕೌನ್ಸಿಲ್ ಕಚೇರಿಯೊಂದು ಇಂದಿಗೂ ಉಳಿದುಕೊಂಡಿದೆ. ಕಟ್ಟಳೆಗಳನ್ನು ನೀಡುವ ಮತ್ತು ರಾಜಸನ್ನದುಗಳನ್ನು ಜಾರಿಗೆ ತರುವ ಕೆಲಸಗಳನ್ನು ಈ ಸಂಸ್ಥೆ ಮಾಡುತ್ತದೆ.
	ಆಂಗ್ಲೊಸ್ಯಾಕ್ಸನರ ಕಾಲದಲ್ಲಿ ರಾಜನಿಗೆ ಸಹಾಯಕವಾಗಿ ಹಿರಿಯರ ಸಭೆಯೊಂದಿತ್ತು. ದೇಶದ ಕೆಲವು ಮಹತ್ತ್ವ ವಿಷಯಗಳ ಮೇಲೆ ನಿರ್ಣಯಗಳನ್ನು ಕೈಗೊಳ್ಳುವಾಗ ಅರಸ ಈ ಸಭೆಯ ಸದಸ್ಯರ ಸಲಹೆಗಳನ್ನು ಪಡೆಯುತ್ತಿದ್ದ. ಆದರೆ ರಾಜನೆ ಸಂಪೂರ್ಣ ಅಡಳಿತಾಧಿಕಾರವನ್ನು ವಹಿಸಿಕೊಂಡಿದ್ದರಿಂದ ಅದರ ಸಲಹೆಗಳನ್ನು ಒಪ್ಪಲೇಬೇಕೆಂಬ ಯಾವ ನಿಯಮವೂ ಇರಲಿಲ್ಲ.
	ನಾರ್ಮನ್ ಮತ್ತು ಅಂಜೆವಿನ್ ಕಾಲದಲ್ಲಿ ಗ್ರೇಟ್ ಕೌನ್ಸಿಲ್ ಮತ್ತು ಕ್ಯೂರಿಯ ರೀಜಿಸ್ ಎಂಬ ಎರಡು ಸಭೆಗಳ ಉದಯಿಸಿದವು. ಇಂಗ್ಲೆಂಡಿನ ಕೇಂದ್ರ ಸರ್ಕಾರದ ಅನೇಕ ಸಂಸ್ಥೆಗಳಂತೆ ಪ್ರಿವಿ ಕೌನ್ಸಿಲ್ ಕೂಡ ನಾರ್ಮನ್ ಅರಸರ ಉದಯವಾಯಿತೆನ್ನಬಹುದು. ಅರಸರ ಪ್ರಮುಖ ಗೇಣಿದಾರರು ಮತ್ತು ರಾಜಮನೆತನದ ಅಧಿಕಾರಿಗಳು ಕ್ಯೂರಿಯ ರೀಜಿಸ್‍ನ ಸದಸ್ಯರಾಗಿದ್ದರು ಕೇಂದ್ರ ಸರ್ಕಾರದ ಎಲ್ಲ ಕಾರ್ಯಗಳನ್ನು ಕ್ಯೂರಿಯ ರೀಜಿಸ್ ನಿರ್ವಹಿಸುತ್ತಿತ್ತು. ಮಹತ್ವದ ಕಾರ್ಯಗಳನ್ನು ಕೈಗೊಳ್ಳುವಾಗ ಮುಖ್ಯ ಗೇಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಹಾಜರಿರುತ್ತಿದ್ದರು. ಕಾಲಕ್ರಮದಲ್ಲಿ ಸಂಖ್ಯೆಯ ಸದಸ್ಯರಿಂದ ಕೂಡಿದ ಸಭೆ ಗ್ರೇಟ್ ಕೌನ್ಸಿಲ್ ಮತ್ತು ಅಲ್ಪಸಂಖ್ಯೆಯ ಸದಸ್ಯರಿಂದ ಕೂಡಿದ ಸಭೆ ಕಿಂಗ್ಸ್ ಕೌನ್ಸಿಲ್ (ರಾಜ ಸಭೆ) ಆಗಿ ಮಾರ್ಪಟ್ಟವು. ಕ್ಯೂರಿಯ ರೀಜಸ್‍ನ ಸಭೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಕರೆಯಲಾಗುತ್ತಿತ್ತು. ಆದರೆ ಕೌನ್ಸಿಲ್ ಮಾತ್ರ ಸದಾಕಾಲ ಅಸ್ತಿತ್ವದಲ್ಲಿರುತ್ತಿತ್ತು.
	ಲಾಂಕಾಸ್ಟ್ರಿಯನರ ಕಾಲದಲ್ಲಿ ಸಭೆ ಕಾರ್ಯತಃ ಪಾರ್ಲಿಮೆಂಟಿನ ಸಮಿತಿಯಾಗಿ ಮಾರ್ಪಟ್ಟಿತು. ಪ್ರಜಾಪ್ರತಿನಿಧಿಗಳಿಗೆ ಪ್ರಪ್ರಥಮವಾಗಿ ಸಭೆಯ ಸದಸ್ಯರಾಗಲು ಅವಕಾಶ ದೊರೆಯಿತು. ಈ ಅವಧಿಯಲ್ಲಿ ಸಭೆಯಲ್ಲೇ ಒಂದು ಒಳವಲಯ ಜನಿಸಿತು. ಈ ಒಳವಲಯಕ್ಕೆ ಪ್ರಿವಿ ಕೌನ್ಸಿಲ್ ಎಂಬ ಹೆಸರು ಪ್ರಾಪ್ತವಾಯಿತು. ಹೆಚ್ಚಿನ ಸದಸ್ಯರನ್ನೊಳಗೊಂಡ ಸಭೆಯನ್ನು ಅರಸನ ಸಾಮಾನ್ಯ ಸಭೆ ಎಂದು ಕರೆಯಲಾಯಿತು. ಆರನೆಯ ಹೆನ್ರಿ ಪ್ರಬಲನಾದುದ್ದರಿಂದ ಸಭೆ ಪಾರ್ಲಿಮೆಂಟಿನ ಅಧೀನಕ್ಕೊಳಗಾಗದೆ ಅರಸನ ದಬ್ಬಾಳಿಕೆಯ ಸಾಧನವಾಯಿತು.
	ಬ್ಯಾರನರ ಪ್ರಭಾವದಿಂದುಂಟಾದ ಅರಾಜಕತೆಗೆ ಬೇಸತ್ತ ಬ್ರಿಟಿಷ್ ಪ್ರಜೆಗಳು ಟ್ಯೂಡರ್ ದೊರೆಗಳ ಕಾಲದಲ್ಲಿ ಶಾಂತಿ ಬಯಸಿದರು. ಇದರಿಂದಾಗಿ ನಾರ್ಮನ್ ಕಾಲದಲ್ಲಿ ಪ್ರಚಲಿತವಿದ್ದ ಕ್ಯೂರಿಯ ಪುನಃ ಟ್ಯೂಡರ್ ಕಾಲದ ಪ್ರಿವಿ ಕೌನ್ಸಿಲ್‍ನಲ್ಲಿ ಜೀವತಳೆಯಿತು. 1485ರಿಂದ 1640ರವರೆಗಿನ ಅವಧಿಯಲ್ಲಿ ಪ್ರಿವಿ ಕೌನ್ಸಿಲ್ ಆಡಳಿತ ನಡೆಸುವ ನ್ಯಾಯಪಾಲನೆ ಮಾಡುವ ಮತ್ತು ಶಾಸನಗಳನ್ನು ವಿಧಿಸುವ ವಿಶೇಷ ಅಧಿಕಾರ ಪಡೆಯಿತು. ಆದರೆ ಈ ಅವಧಿಯಲ್ಲಿ ಅದು ಪಾರ್ಲಿಮೆಂಟಿನ ಪ್ರತಿನಿಧಿಯಾಗಿರದೆ ಅರಸನ ಕೈಗೊಂಬೆಯಾಗಿತ್ತು. ಎಂಟನೆಯ ಹೆನ್ರಿ, ಎಲಿಜಬೆತ್ ರಾಣೀ ಇವರು ಸ್ವಯಂ ಪ್ರಧಾನಿಗಳೂ ಆಗಿದ್ದರು. ಅವರು ಸಭೆಯ ಸದಸ್ಯರ ಸಲಹೆ ಕೇಳದೆ ತಮಗೆ ಇಷ್ಟವೆನಿಸಿದ ಸದಸ್ಯರ ಸಲಹೆಗಳನ್ನು ಮಾತ್ರ ಕೇಳುತ್ತಿದ್ದರು. ಆಡಳಿತದ ಕಕ್ಷೆ ವಿಸ್ತರಿಸಿದಂತೆ ಅರಸನ ಸಭೆಯ ವಿವಿಧ ಕಾರ್ಯಗಳನ್ನು ಪ್ರಿವಿ ಕೌನ್ಸಿಲ್‍ಕೋರ್ಟ್ ಆಫ್ ಸ್ಟರ್ ಚೇಬರ್ (ರಾಜನ ಹಿತಾರ್ಥಗಳಿಗೆ ಕುಂದು ತಂದ ಅಪರಾಧಗಳನ್ನು ಕ್ಷಿಪ್ರದಲ್ಲಿ ಮನಬಂದಂತೆ ವಿಚಾರಣೆ ನಡೆಸಿ ತೀರ್ಪುಕೊಡುತ್ತಿದ್ದ. 1650ರಲ್ಲಿ ರದ್ದುಗೊಳಿಸಿದ. ನ್ಯಾಯಸ್ಥಾನ). ಕೋರ್ಟ್ ಆಫ್ ರಿಕ್ವೆಸ್ಟ್, ಕೋರ್ಟ್ ಆಫ್ ಹೈ ಕಮಿಷನ್, ಕೌನ್ಸಿಲ್ ಆಫ್ ದಿ ನಾರ್ತ್ ಮುಂತಾದವು ನಿರ್ವಹಿಸತೊಡಗಿದವು. ಅರಸನಿಗೆ ಅನುವರ್ತಿಯಾಗಿದ್ದ ಆಸ್ಥಾನ ಸಭೆಯೇ ಪ್ರಿವಿ ಕೌನ್ಸಿಲ್ ಎಂದು ಪ್ರಸಿದ್ಧಿಗೆ ಬಂತು.
	1540ರಲ್ಲಿ ಪ್ರಿವಿ ಕೌನ್ಸಿಲ್‍ನ ಸದಸ್ಯರ ಸಂಖ್ಯೆ 19 ಇದ್ದದ್ದು. 8ನೆಯ ಹೆನ್ರಿಯ ಮರಣದ ವೇಳೆಗೆ 29ಕ್ಕೆ ಏರಿತ್ತು. 6ನೆಯ ಎಡ್ವರ್ಡನ ಕಾಲದಲ್ಲಿ 40, ಮೇರಿಯ ಕಾಲದಲ್ಲಿ 44, 1ನೆಯ ಎಲಿಜಬೆತಳ ಕಾಲದಲ್ಲಿ 12ರಿಂದ 20, 1623ರ ಸುಮಾರಿಗೆ ಸರಾಸರಿ 35 ಮತ್ತು ಸ್ಟುಯರ್ಟ್‍ದೊರೆ 1ನೆಯ ಚಾಲ್ರ್ಸ್‍ನ ಕಾಲದಲ್ಲಿ ಸರಾಸರಿ 35 ಆಗಿತ್ತು. 2ನೆಯ ಚಾಲ್ರ್ಸ್‍ನ ಆಳ್ವಿಕೆಯ ಆರಂಭದ ಕಾಲದಲ್ಲಿ 28 ಸದಸ್ಯರಿದ್ದರು. 1679ರ ಸುಮಾರಿಗೆ ಸಂಖ್ಯೆ 47ನ್ನು ತಲುಪಿತ್ತು. 1707ರಲ್ಲಿ ಪ್ರಿವಿ ಕೌನ್ಸಿಲಿನ ಸದಸ್ಯರ ಸಂಖ್ಯೆ 60ಕ್ಕೂ 1723ರಲ್ಲಿ 67ಕ್ಕೂ ಏರಿತು.
	ಪ್ರಿವಿ ಕೌನ್ಸಿಲ್ ಇಷ್ಟೊಂದು ಬೃಹತ್ ಆಗಿ ಬೆಳೆದರೂ 2ನೆಯ ಚಾಲ್ರ್ಸ್ ಮತ್ತು ಅವನ ಅನಂತರದ ದೊರೆಗಳು ಮಹತ್ತ್ವದ ವಿಷಯಗಳನ್ನು ತಮ್ಮ ಮಂತ್ರಿಮಂಡಲದ ಪ್ರಧಾನ ಸಲಹೆಗಾರರೊಂದಿಗೆ ಗುಟ್ಟಾಗಿ ಚರ್ಚಿಸುತ್ತಿದ್ದರೇ ವಿನಾ ಎಲ್ಲರೊಂದಿಗೆ ಬಹಿರಂಗವಾಗಿ ಚರ್ಚಿಸುತ್ತಿರಲಿಲ್ಲ.
	ಹ್ಯಾನೊವರ್ ಮನೆತನದ ಅಳ್ವಿಕೆ ಪ್ರಾರಂಭವಾದಾಗ 1701ರ ಸೆಟ್ಲ್‍ಮೆಂಟ್ ಅಧಿನಿಯಮದ ಪ್ರಕಾರ ಪ್ರಿವಿ ಕೌನ್ಸಿಲನ್ನು ಪುನಃಶ್ಚೇತನಗೊಳಿಸಲು ಪ್ರಯತ್ನಿಸಲಾಯಿತು. ಅದರಂತೆ, ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಪ್ರಿವಿ ಕೌನ್ಸಿಲ್‍ನಲ್ಲಿ ಚರ್ಚೆಗೆ ಬಂದು, ತೀರ್ಮಾನಗಳಿಗೆ ಸದಸ್ಯರ ಅಸ್ತು ದೊರೆಯಬೇಕೆಂದಾಯಿತು.
	1ನೆಯ ಜಾರ್ಜ್ ಸಿಂಹಾಸನವೇರಿದಂದಿನಿಂದ ಪ್ರಿವಿ ಕೌನ್ಸಿಲ್ ಔಪಚಾರಿಕ ಸಂದರ್ಭಗಳಲ್ಲಿ ಸಮಾವೇಶಗೊಳ್ಳುವ, ಕೇವಲ ಔಪಚಾರಿಕ ಕಾರ್ಯಗಳನ್ನು ನಿರ್ವಹಿಸಲು ಒಂದು ಔಪಚಾರಿಕ ಸಂಸ್ಥೆಯಾಗಿ ಪರಿಣಮಿಸಿತು. 1960ರಲ್ಲಿ ಇದರ ಸಂಖ್ಯೆ 300ಕ್ಕೆ ಏರಿತ್ತು. ರಾಜಕೀಯ, ನ್ಯಾಯಾಂಗ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಉನ್ನತ ಅಧಿಕಾರಗಳಲ್ಲಿದ್ದ ಪ್ರತಿಷ್ಠಿತರು ಮತ್ತು ಕೆಲವೊಮ್ಮೆ ಸಾಹಿತ್ಯ ಮತ್ತು ವಿಜ್ಞಾನ ರಂಗಗಳಲ್ಲಿಯ ಪ್ರತಿಷ್ಠಿತರು ಪ್ರಿವಿ ಕೌನ್ಸಿಲ್‍ನ ಸದಸ್ಯರು.
	ಭಾರತದಲ್ಲಿನ ಸುಮಾರು ಕಾನೂನುಗಳು ಬ್ರಿಟಿಷ್‍ರ ಆಡಳಿತದಲ್ಲಿ ಹೊರಬಂದಿರುವುದರಿಂದ ಹಾಗೂ ತತ್ಸಂಬಂಧ ಕಾನೂನುಗಳು ಪ್ರಿವಿ ಕೌನ್ಸಿಲ್‍ನ ಆದೇಶ ಅಥವಾ ತೀರ್ಪಿನ ಅನುಗುಣವಾಗಿ ಆ ಕಾನೂನುಗಳನ್ನು ಪಾಲಿಸುತ್ತಿದ್ದುದುಂಟು. ಆದರೆ ಈಗ ಆ ರೀತಿಯ ಹಳೆಯ ಪ್ರಿವಿ ಕೌನ್ಸಿಲ್‍ನ ತೀರ್ಪಿನ ಆಧಾರದ ಮೇಲೆ ತೀರ್ಪು ನೀಡುತ್ತಿಲ್ಲ.
(ಎ.ಕೆ.ಎಸ್.ಎಚ್.ಎ.) (ಪರಿಷ್ಕರಣೆ : ಮೈಸೂರು ವಿಶ್ವವಿದ್ಯಾನಿಲಯ)